ಝಾನ್ಸಿ ಸಂಸ್ಥಾನದ ರಾಣಿ (1835-58). ಬ್ರಿಟಿಷರ ವಿರುದ್ಧ ಧೈರ್ಯವಾಗಿ ಹೋರಾಟ ನಡೆಸಿದ ಧೀರಮಹಿಳೆ. 1835 ನವೆಂಬರ್ 19ರಂದು ಕಾಶಿಯಲ್ಲಿ ಜನಿಸಿದಳು. ತಂದೆ ಮೋರೋ ಪಂತ ತಾಂಬೆ, ತಾಯಿ ಭಾಗೀರಥೀಬಾಯಿ. ಈಕೆಯ ಬಾಲ್ಯದ ಹೆಸರು ಮನೂಬಾಯಿ. ಈಕೆ ಮೂರು ವರ್ಷದ ಬಾಲೆಯಾಗಿರುವಾಗಲೇ ತಾಯಿ ತೀರಿಕೊಂಡಳು. ತಂದೆಯ ಪ್ರೀತಿಯ ಮಗಳಾಗಿ, ಹೆಚ್ಚಿನ ಸಮಯವನ್ನು ಅವರೊಂದಿಗೆ ಕಳೆದಳು. ಮೋರೊಪಂತ ತಾಂಬೆಯ ಆಶ್ರಿತ ಅಪ್ಪಾಸಾಹೇಬ. ಆತನ ಮಕ್ಕಳು ಹಾಗೂ ಮನೂಬಾಯಿ ಒಂದೇ ವಯಸ್ಸಿನವರಾದ್ದರಿಂದ ಅವರೊಂದಿಗೆ ಈಕೆಯ ವಿದ್ಯಾಭ್ಯಾಸ ಒಟ್ಟಿಗೆ ನಡೆಯಿತು. ಅಪ್ಪಾಸಾಹೇಬ ಅನಾರೋಗ್ಯದಿಂದ ತೀರಿಕೊಂಡಾಗ ಮೋರೋಪಂತ ತಾಂಬೆ ಬಾಜೀರಾಯನ ಆಶ್ರಯ ಕೋರಿದ. ಎರಡನೆಯ ಬಾಜೀರಾಯ ಪೇಶ್ವೆ ಸ್ಥಾನವನ್ನು ಕಳೆದುಕೊಂಡ ಅನಂತರದಲ್ಲಿ ಚಿತ್ತೂರಿಗೆ ಬಂದು ನೆಲೆಸಿದ. ಮೋರೋಪಂತ ತಾಂಬೆಯೂ ಅವನೊಟ್ಟಿಗೆ ಚಿತ್ತೂರಿಗೆ ಬಂದು ನೆಲೆಸಿದ.

ಮನುಬಾಯಿ ಬಾಲ್ಯವನ್ನು ಹೆಚ್ಚಾಗಿ ಪುರುಷರೊಟ್ಟಿಗೆ ಕಳೆದುದರ ಪರಿಣಾಮವಾಗಿ ಇವಳು ಯುದ್ಧ ಕಲೆಯನ್ನು ಕಲಿಯಲು ಆಸಕ್ತಿ ತೋರಿದಳು. ಬಾಜೀರಾಯನ ಮಕ್ಕಳೊಂದಿಗೆ ಈಕೆ ಯುದ್ಧ ಕಲೆ ಕಲಿಯಲು ತಂದೆ ವ್ಯವಸ್ಥೆ ಮಾಡಿದ. ಕುದುರೆ ಸವಾರಿ, ಕತ್ತಿವರಸೆ ಮುಂತಾದ ಯುದ್ಧಕಲೆಗಳಲ್ಲಿ ಪರಿಣತಿ ಸಾಧಿಸಿದಳು. ಸಣ್ಣ ವಯಸ್ಸಿನಲ್ಲಿಯೇ ಬಹಳ ತೀಕ್ಷ್ಣವಾದ, ಸೂಕ್ಷ್ಮವಾದ ಪರಿಶೀಲನಜ್ಞಾನವನ್ನು ಈಕೆ ಪಡೆದಿದ್ದಳು. ಇವಳ ಏಳನೆಯ ವಯಸ್ಸಿನಲ್ಲಿ ಝಾನ್ಸಿ ಸಂಸ್ಥಾನದ ರಾಜ ಗಂಗಾಧರ ನವಲ್‍ಕರ್‍ನೊಡನೆ ಲಗ್ನವಾಯಿತು (1842). ಅಂದಿನಿಂದ ಅತ್ತೆ ಮನೆಯವರು ಇವಳನ್ನು ಲಕ್ಷ್ಮೀಬಾಯಿ ಎಂದು ಕರೆದರು. ವಿವಾಹದ ಅನಂತರ ಝಾನ್ಸಿ ಸಂಸ್ಥಾನದ ಪುಸ್ತಕ ಭಂಡಾರ ಇವಳ ಜ್ಞಾನ ವಿಕಾಸಕ್ಕೆ ನೆರವಾಯಿತು. ಗಂಗಾಧರ ನವಲ್‍ಕರ್‍ನ ಆಳಿಕೆಯಲ್ಲಿ ಝಾನ್ಸಿ ಪ್ರಗತಿ ಕಂಡಿತು. ಬ್ರಿಟಿಷರ ಅಧೀನದಲ್ಲಿದ್ದರೂ ಯಾವುದೇ ದಂಗೆ, ಗಲಭೆಗಳಿಲ್ಲದೆ ರಾಜ್ಯ ಶಾಂತಿಯಿಂದಿತ್ತು. ಲಕ್ಷ್ಮೀಬಾಯಿ ಸಂಸ್ಥಾನದ ಉತ್ತರಾಧಿಕಾರಿಗೆ ಜನ್ಮವಿತ್ತರೂ (1851) ಮಗು ಹೆಚ್ಚು ಕಾಲ ಉಳಿಯಲಿಲ್ಲ. ಪುತ್ರನ ಅಕಾಲಿಕ ಮರಣದಿಂದ ಗಂಗಾಧರ ನವಲ್‍ಕರ್ ಅನಾರೋಗ್ಯಕ್ಕೆ ತುತ್ತಾಗಿ ಮರಣಹೊಂದಿದ (1856 ನವೆಂಬರ್ 21). ಕೇವಲ ಇಪ್ಪತ್ತೊಂದು ವರ್ಷದ ಲಕ್ಷ್ಮೀಬಾಯಿ ರಾಜ್ಯದ ಚುಕ್ಕಾಣಿಯನ್ನು ಹಿಡಿದಳು. ಪತಿಯ ಆಶಯದಂತೆ ಸಂಬಂಧಿಕರ ಮಗುವನ್ನು ದತ್ತು ತೆಗೆದುಕೊಂಡಳಾದರೂ ಈ ದತ್ತು ಸ್ವೀಕಾರವನ್ನು  ಬ್ರಿಟಿಷರು  ನಿರಾಕರಿಸಿದರು. ಗಂಗಾಧರ ನವಲ್‍ಕರ್ ಇದ್ದಾಗ ನಡೆದ ಒಪ್ಪಂದದಂತೆ ಬ್ರಿಟಿಷರು ಅನಂತರದಲ್ಲಿ ನಡೆದುಕೊಳ್ಳದೆ ಝಾನ್ಸಿ ಸಂಸ್ಥಾನದಲ್ಲಿ ಸಣ್ಣಪುಟ್ಟ ದಂಗೆ ಪ್ರಾರಂಭಿಸಿದರು. ಸದಾಶಿವ ನಾರಾಯಣ ಮತ್ತು ನಥೇರ್ಖಾನ ಈ ದಂಗೆ ಏಳಲು ಕಾರಣರಾಗಿದ್ದರು. ಈಕೆ ಬುದ್ಧಿವಂತಿಕೆಯಿಂದ ದಂಗೆಯನ್ನು ನಿಗ್ರಹಿಸಿ, ಪ್ರಜೆಗಳು ನಿರ್ಭಯರಾಗಿ ಜೀವಿಸಲು ಅನುವು ಮಾಡಿದಳು. ಶಿಸ್ತಿನ ಸಿಪಾಯಿ, ನೇರ ನಡೆನುಡಿಯವಳಾದ ಲಕ್ಷ್ಮೀಬಾಯಿ ಸಂಸ್ಥಾನದ ಆಡಳಿತವನ್ನು ತಾನೇ ಕುಳಿತು ಅವಲೋಕಿಸುತ್ತಿದ್ದಳು. ಇವಳು ಕಚೇರಿಗೆ ಹೋಗುವಾಗ ಪುರುಷ ಉಡುಗೆ ತೊಟ್ಟರೂ ಉಳಿದಂತೆ ಬಿಳಿ ವಸ್ತ್ರ ಹಾಗೂ ಸರಳ ಆಭರಣಗಳನ್ನು ಧರಿಸುತ್ತಿದ್ದಳು. ಕುದುರೆ ಸವಾರಿ ಹಾಗೂ ಯುದ್ಧಕಲೆಗಳಲ್ಲಿ ಅಪಾರ ಅನುಭವ ಪಡೆದಿದ್ದ ಇವಳು ತನ್ನ ಸಂಸ್ಥಾನದ ಆಡಳಿತವನ್ನು ದಕ್ಷತೆಯಿಂದ ನಿರ್ವಹಿಸಿ ಶಾಂತಿ ಕಾಪಾಡಿದಳು. ಆಕ್ರಮಣಶೀಲ ಬ್ರಿಟಿಷರ ಮತ್ತು ಭಾರತದ ಸ್ವಾತಂತ್ರ್ಯ ವಾದಿಗಳ ನಡುವೆ ಅಲ್ಲಲ್ಲಿ ಘರ್ಷಣೆಗಳು ನಡೆಯುತ್ತಿದ್ದುವು. ಇಂಥ ಘರ್ಷಣೆ ಮಾಡುತ್ತಿದ್ದ ವ್ಯಕ್ತಿಗಳನ್ನು ಬ್ರಿಟಿಷರು ಎಚ್ಚರದಿಂದ ಕಾಯುತ್ತಿದ್ದರು. ಇಂಥ ಸಮಯದಲ್ಲಿ ಸಾಧುವೇಷದಲ್ಲಿ ಬಂದ ಭಾರತೀಯ ಸ್ವಾತಂತ್ರ್ಯ ಪ್ರೇಮಿಯೊಬ್ಬನಿಗೆ ಝಾನ್ಸಿ ರಾಣಿ ಧನಸಹಾಯ ಮಾಡಿದ ವಿಚಾರ ಬ್ರಿಟಿಷರ ಕಿವಿಗೆ ಬಿತ್ತು. ಬ್ರಿಟಿಷರು ಈಕೆಯ ಬಗ್ಗೆ ಅನುಮಾನಗೊಂಡು ತಕ್ಷಣ ಈಕೆಯ ಆಳಿಕೆಯಲ್ಲಿದ್ದ ಝಾನ್ಸಿ ಸಂಸ್ಥಾನವನ್ನು ಪಡೆಯಲು ಪ್ರಯತ್ನಿಸಿದರು. ಇವಳು ದಂಗೆಕೋರರ ಪರವಾಗಿ ಕೆಲಸ ಮಾಡುತ್ತಿದ್ದಾಳೆಂದು ಆರೋಪಿಸಿದಾಗ ರಾಣಿ ಮತ್ತು ಬ್ರಿಟಿಷರ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ಸ್ವಾಭಿಮಾನಿಯಾದ ಇವಳು ರಾಜ್ಯವನ್ನು ಬ್ರಿಟಿಷರಿಗೆ ಹಿಂತಿರುಗಿಸಲು ನಿರಾಕರಿಸಿದಾಗ ಯುದ್ಧ ನಡೆಯುವ ಸಾಧ್ಯತೆಗಳು ಹೆಚ್ಚಾದುವು. ಸಂಸ್ಥಾನದ ಸಂರಕ್ಷಣೆಗಾಗಿ ಯುದ್ಧ ಸಿದ್ಧತೆಗಳನ್ನು ಮಾಡಿಕೊಂಡು ಪ್ರಜೆಗಳಲ್ಲಿ ಧೈರ್ಯತುಂಬಿ, ಝಾನ್ಸಿ ಕೋಟೆಯನ್ನು ಬಲಪಡಿಸಿದಳು. ಪ್ರಜೆಗಳ ನಿಷ್ಠೆ, ಇವಳ ಹೋರಾಟ ಮನೋಭಾವ ಬ್ರಿಟಿಷರಿಗೆ ಪ್ರಾರಂಭದಲ್ಲಿ ಕಷ್ಟವಾಯಿತು. ಆದರೆ ಬ್ರಿಟಿಷರು ಸರ್ ಹೂರೋಜ್‍ನ ಮುಖಂಡತ್ವದಲ್ಲಿ ಝಾನ್ಸಿ ಕೋಟೆಗೆ ಮುತ್ತಿಗೆ ಹಾಕಿದರು (1858 ಮಾರ್ಚ್ 22). ಇವಳು ಅತ್ಯಂತ ದಕ್ಷತೆ, ಶೌರ್ಯದಿಂದ ಹೋರಾಟ ನಡೆಸಿದಳು. ಬ್ರಿಟಿಷರ ಫಿರಂಗಿ ಹೊಡೆತಗಳಿಂದ ಕೋಟೆ ಭಗ್ನಗೊಂಡರೂ ಕೋಟೆಯನ್ನು ಸರಿಪಡಿಸಿದಳು. ಯುದ್ಧಕಾಲದಲ್ಲಿ ಇವಳು ತನ್ನ ಪ್ರಜೆಗಳ ಬೆಂಬಲ ಹಾಗೂ ತಾತ್ಯಾಟೋಪೆಯ ಸೇನೆಯೊಂದಿಗೆ ಸೇರಿಕೊಂಡು ಬ್ರಿಟಿಷರ ದಾಳಿಗೆ ಪ್ರತಿದಾಳಿಯನ್ನು ನೀಡಿದಳಾದರೂ ಬ್ರಿಟಿಷರ ಸುಸಜ್ಜಿತ ಸೇನೆಯ ಎದುರು ಸೋಲು ಒಪ್ಪಿಕೊಳ್ಳಬೇಕಾಯಿತು. ಝಾನ್ಸಿ ಕೋಟೆ ಬ್ರಿಟಿಷರ ವಶವಾಗುತ್ತಿದ್ದಾಗಲೇ ಇವಳು ಮತ್ತು ಇವಳ ಅಂಗರಕ್ಷಕ ದಳ ತಪ್ಪಿಸಿಕೊಂಡು ಕಾಲ್ಪಿಗೆ ಹೋಗಿ ತಾತ್ಯಾಟೋಪೆಯನ್ನು ಸೇರಿಕೊಂಡರು. ಅನಂತರ ಬ್ರಿಟಿಷರು ಕಾಲ್ಪಿಯ ಮೇಲೆ ದಾಳಿ ಮಾಡಿದರು. ಆಗ ಇವಳು ಮತ್ತು ತಾತ್ಯಾಟೋಪೆ ಸಮಾಲೋಚಿಸಿ ಬ್ರಿಟಿಷರನ್ನು ದಿಕ್ಕುತಪ್ಪಿಸುವ ಪ್ರಯತ್ನ ಮಾಡಿದರು. ಅದರಂತೆ ಇವರು ಬ್ರಿಟಿಷರ ಸ್ನೇಹಿತ ಸಿಂಧ್ಯಾನ ರಾಜ್ಯ ಗ್ವಾಲಿಯರ್ ಮೇಲೆ ದಾಳಿ ನಡೆಸಿದರು. ಇವರ ದಾಳಿಗೆ ಸಿಂಧ್ಯ ಮತ್ತು ಈತನ ಬೆಂಗಲಿಗರು ಅಲ್ಲಿಂದ ತಪ್ಪಿಸಿ ಕೊಂಡು ಓಡಿಹೋದರು. ಬ್ರಿಟಿಷರು ತಮ್ಮ ಸ್ನೇಹಿತನ ರಾಜಧಾನಿಯನ್ನು ಹಿಂತಿರುಗಿಸಲು ಗ್ವಾಲಿಯರ್‍ಗೆ ಮುತ್ತಿಗೆ ಹಾಕಿದರು. ಲಕ್ಷ್ಮೀಬಾಯಿಯು ತಾತ್ಯಾಟೋಪೆಯೊಂದಿಗೆ ಕೋಟೆಯೊಳಗೆ ಬ್ರಿಟಿಷರ ಚಲನವಲನಗಳನ್ನು ಗಮನಿಸುತ್ತಿರುವಾಗ ಹೊರಗಿನಿಂದ ಬಂದ ಫಿರಂಗಿಯ ಗುಂಡು ತಗುಲಿ ಅಸುನೀಗಿದಳು (1858 ಜೂನ್ 17). ಕೋಟೆ ಮತ್ತು ಫೂಲ್‍ಬಾಗ್‍ಗಳ ನಡುವೆ ನದಿತೀರದಲ್ಲಿ ಈಕೆಯ ಸಂಸ್ಕಾರವನ್ನು ನೆರವೇರಿಸಲಾಯಿತು. 	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ